ಕ್ಷಾರ
 	ಒಂದು ಲೋಹದ, ಅದರಲ್ಲೂ ಕ್ಷಾರಲೋಹಗಳಲ್ಲೊಂದರ ದ್ರಾವ್ಯ ಹೈಡ್ರಾಕ್ಸೈಡ್ (ಆಲ್ಕಲಿ). ಸಾಮಾನ್ಯವಾಗಿ ಅಧಿಕ ಪ್ರತ್ಯಾಮ್ಲೀಯ ಗುಣಗಳಿರುವ ಯಾವುದೇ ಸಂಯುಕ್ತವನ್ನು ಕ್ಷಾರವೆಂದು ಕರೆಯುವುದಿದೆ. ಕ್ಷಾರಪದಾರ್ಥಗಳು ದ್ರಾವಣರೂಪದಲ್ಲಿರುವಾಗ ಕೆಂಪು ಲಿಟ್‍ಮಸ್‍ನ ಬಣ್ಣವನ್ನು ನೀಲಿ ಬಣ್ಣಕ್ಕೆ ತಿರುಗಿಸುತ್ತವೆ.  ಇದು ಕ್ಷಾರದ್ರಾವಣಗಳ ವಿಶಿಷ್ಟ ಗುಣ.  ಕ್ಷಾರದ್ರಾವಣವೊಂದು ಆಮ್ಲದೊಡನೆ ವರ್ತಿಸಿದಾಗ ಆಮ್ಲ ತಟಸ್ಥ ಹೊಂದಿ ಲವಣ ಮತ್ತು ನೀರು ಉತ್ಪತ್ತಿಯಾಗುತ್ತವೆ.  ಆಮ್ಲವನ್ನು ತಟಸ್ಥಗೊಳಿಸುವ ಗುಣವಿರುವ ಇಲ್ಲವೆ ದ್ರಾವ್ಯ ಸಾಬೂನು (ಸೋಪ್) ಮತ್ತು ಕೊಬ್ಬಿನ ಆಮ್ಲಗಳನ್ನು ಕೊಡುವಂಥ ಕಾಸ್ಟಿಕ್ ಹೈಡ್ರಾಕ್ಸೈಡ್ ಎಂಬುದಾಗಿ ಹಿಂದೆ ಕ್ಷಾರದ ವ್ಯಾಖ್ಯೆ ಮಾಡಲಾಗಿತ್ತು.  ಕೈಗಾರಿಕಾರಂಗದಲ್ಲಿ ಹೇಳುವುದಾದರೆ, ನೈಸರ್ಗಿಕ ನಿಕ್ಷೇಪಗಳಿಂದ ದೊರೆತ ಇಲ್ಲವೆ ಲವಣ ಮತ್ತು ಸಲ್ಫ್ಯೂರಿಕ್ ಆಮ್ಲವೋ ಇಲ್ಲವೇ ಅಮೋನಿಯಂ ಬೈಕಾರ್ಬೊನೇಟನ್ನು ಉಪಯೋಗಿಸಿ ತಯಾರಿಸಿದ ಸೋಡ ಆಷ್ ರೂಪದ ಸೋಡಿಯಂ ಕಾರ್ಬೊನೇಟನ್ನುಕ್ಷಾರವೆಂದು ಹೇಳಲಾಗುತ್ತದೆ.

ಕ್ಷಾರಗಳನ್ನು ಸಾಮಾನ್ಯವಾಗಿ ಸಾರ ಮತ್ತು ಸಾರರಿಕ್ತ ಕ್ಷಾರಗಳೆಂದು ವಿಂಗಡಿಸಲಾಗಿದೆ. ಬೇರಿಯಂ, ಕ್ಯಾಲ್ಸಿಯಂ, ಮೆಗ್ನೀಸಿಯಂ ಮುಂತಾದ ಹೈಡ್ರಾಕ್ಸೈಡುಗಳು, ಕಾರ್ಬೊನೇಟ್ ಮತ್ತು ಆಕ್ಸೈಡುಗಳು (ದ್ರಾವಣ ರೂಪದಲ್ಲಿ) ಸಾರರಿಕ್ತ ಕ್ಷಾರಕ್ಕೆ ಉದಾಹರಣೆಗಳು. ಸೋಡಿಯಂ ಹೈಡ್ರಾಕ್ಸೈಡ್ ಸಾರಕ್ಷಾರಕ್ಕೆ ಒಂದು ಉದಾಹರಣೆ. ಕ್ಷಾರಗಳು ನೀರಿನಲ್ಲಿ ವಿಲೀನವಾಗುತ್ತವೆ.  ಬಣ್ಣ ಮಾಸಲು. ಸಾರಕ್ಷಾರ ದ್ರಾವಣ ಚರ್ಮದ ಮೇಲೆ ಬಿದ್ದರೆ ಚರ್ಮ ಸುಟ್ಟುಹೋಗುವುದು.  ಕ್ಷಾರ ದ್ರಾವಣವನ್ನು ವಿದ್ಯುದ್ವಿಭಜಿಸಿದಾಗ ಲೋಹ ಹೊರಬರುತ್ತದೆ. ಪೊಟಾಷ್, ಕಾಸ್ಟಿಕ್ ಸೋಡ, ಪೊಟ್ಯಾಸಿಯಂ ಹೈಡ್ರಾಕ್ಸೈಡ್, ವಾಟರ್ ಗ್ಲಾಸ್, ಸೋಡಾದ ಬೈಕಾರ್ಬೊನೇಟ್ ಇವು ಕೆಲವು ಕ್ಷಾರ ಉತ್ಪನ್ನಗಳು.  ಗಾಜು, ಸಾಬೂನು, ರಾಸಾಯನಿಕ ವಸ್ತುಗಳು, ಪೆಟ್ರೋಲಿಯಂ ಉದ್ಯಮ, ಕಾಗದ, ರೇಯಾನ್ ಮತ್ತು ಇತರ ಕೃತಕ ಬಟ್ಟೆಗಳು ಈ ಮುಂತಾದ ಕ್ಷೇತ್ರಗಳಲ್ಲಿ ಕ್ಷಾರದ ಬಳಕೆ ಉಂಟು.    (ಎನ್.ಎಸ್.ಎಸ್.ಪಿ.)